ಕುಲಪತಿಗಳ ಮಾತು

 

ಪ್ರೊ. ಸಬಿಹಾ,
 
ಕುಲಪತಿಗಳು
 ಕರಾಅಮವಿವಿ

ಶುಭಾಶಯ ಮತ್ತು ಹಾರೈಕೆಗಳು

ಮಹಿಳೆಯರ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಅವಕಾಶಗಳ ಹೆಬ್ಬಾಗಿಲು ತೆರೆಯುವುದರೊಂದಿಗೆ ಸರ್ವಾಂಗೀಣ ಪ್ರಗತಿಯತ್ತ ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ ಹಲವು ಅಭಿವೃದ್ಧಿಪರ ಚಟುವಟಿಕೆಗಳನ್ನು ನಡೆಸುತ್ತಿದೆ. ಮಹಿಳೆಯರ ಸಶಕ್ತೀಕರಣಕ್ಕಾಗಿ ಹಲವು ವಿನೂತನ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗಿದೆ. ವಿಶ್ವವಿದ್ಯಾಲನಿಯವು ಜ್ಞಾನ, ಸಂಸ್ಕೃತಿ ಮತ್ತು ಮಹಿಳೆಯರ ಸಮಗ್ರ ವ್ಯಕ್ತಿತ್ವ ರೂಪಿಸುವುದಕ್ಕಾಗಿ ಅಪಾರವಾಗಿ ಶ್ರಮಿಸುತ್ತಿದೆ. ಅದರೊಂದಿಗೆ ವಿಶ್ವವಿದ್ಯಾನಿಲಯವು ಗ್ರಾಮೀಣ ಪ್ರದೇಶದ ಮಹಿಳೆಯರ ಸಾಮಾಜಿಕ- ಆರ್ಥಿಕ ಸ್ಥಿತಿ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯವು, ವಿಜಯಪುರ ನಗರದಲ್ಲಿ 2003-04ನೇ ಶೈಕ್ಷಣಿಕ ವರ್ಷದಲ್ಲಿ ಸ್ಥಾಪನೆಗೊಂಡು ಕಾರ್ಯಾರಂಭ ಮಾಡಿತು.ಇದಕ್ಕೆ 2017 ಜೂನ್ 11ರಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣ ಮಾಡಲಾಯಿತು. 12ನೇ ಶತಮಾನದ ಶರಣ ಚಳವಳಿಯಲ್ಲಿ ಅಕ್ಕಮಹಾದೇವಿಗೆ ಅನನ್ಯ ಸ್ಥಾನಮಾನವಿದೆ. ಶರಣ ಚಳವಳಿಯ ಸಂದರ್ಭದಲ್ಲಿ ತ್ಯಾಗದ ಅತ್ಯುತ್ತಮ ಮಾದರಿಯಾಗಿದ್ದ ‘ಅಕ್ಕ’ ಮಹಿಳೆಯೊಬ್ಬಳು ತಲುಪಬಹುದಾದ ಆಧ್ಯಾತ್ಮಿಕ ಅತ್ಯುನ್ನತ ಸ್ಥಿತಿ ತಲುಪಿದ ಜೀವಂತ ನಿದರ್ಶನ. ನೈತಿಕ ಎಚ್ಚರದ ಸಂಕೇತದಂತಿದ್ದ ಅಕ್ಕಮಹಾದೇವಿಯು ದೈವೀಶಕ್ತಿಯ ಹಾಗೆ ಎಲ್ಲ ಶರಣರ ಮೇಲೆ ಪ್ರಭಾವ ಬೀರಿದ್ದಳು. ಆದುದರಿಂದ ಸಾರ್ವಕಾಲಿಕ ಅತ್ಯುನ್ನತ ಮಹಿಳಾ ಸಾಧಕಿಯಾದ ಅಕ್ಕ ಮಹಾದೇವಿಯ ಹೆಸರಿನಿಂದ ವಿಶ್ವವಿದ್ಯಾನಿಲಯವನ್ನು ಮರುನಾಮಕರಣ ಮಾಡಿರುವುದು ಸೂಕ್ತ ಮತ್ತು ಅರ್ಥಪೂರ್ಣ ಆಗಿದೆ.

ವಿಶ್ವವಿದ್ಯಾನಿಲಯವು ಕೇವಲ ಆರು ಸ್ನಾತಕೋತ್ತರ ಕೋರ್ಸುಗಳೊಂದಿಗೆ ಕಾರ್ಯಾರಂಭ ಮಾಡಿತು. ಆರಂಭದಲ್ಲಿ ಉತ್ತರ ಕರ್ನಾಟಕದ 13 ಜಿಲ್ಲೆಗಳ 227 ವಿದ್ಯಾರ್ಥಿಗಳಿದ್ದರು. ಸದ್ಯ 2016-17ನೇ ಸಾಲಿನಲ್ಲಿ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು 32 ವಿವಿಧ ಸ್ನಾತಕೋತ್ತರ ಕೋರ್ಸುಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆ ಉಡುತಡಿಗಳಲ್ಲಿ ವಿಸ್ತರಣಾ ಕೇಂದ್ರ ಮತ್ತು  ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಲಾಗಿದೆ.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತ ಮಹಿಳೆಯರು ತಮ್ಮ ಬಯಕೆಯ ಜ್ಞಾನಕ್ಷೇತ್ರದಲ್ಲಿ ಅಧ್ಯಯನ ನಡೆಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ 2006-07ನೇ ಸಾಲಿನಿಂದಲೇ ಪಿಎಚ್. ಡಿ. ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ 300ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ವಿವಿಧ ವಿಷಯದ ಶಿಸ್ತುಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.

ವಿಶ್ವವಿದ್ಯಾನಿಲಯವು ಮಹಿಳಾ ವಿದ್ಯಾರ್ಥಿಗಳಿಗಾಗಿಯೇ ವಿಶೇಷವಾದ ಅನನ್ಯ ಪಠ್ಯಕ್ರಮ ಅಳವಡಿಸಿದೆ. ಈಗಾಗಲೇ ಇರುವ ಸಾಮಾನ್ಯ ವಿಷಯಗಳ ಜೊತೆಗೆ ವಿದ್ಯಾರ್ಥಿಗಳು ಮಹಿಳಾ ನ್ಯಾಯಶಾಸ್ತ್ರ, ಮಹಿಳೆಯರ ಆರೋಗ್ಯ, ಯೋಗ ಅಧ್ಯಯನ, ಕಂಪ್ಯೂಟರ್ ತಂತ್ರಜ್ಞಾನ, ಮಾಹಿತಿ ಸಾಕ್ಷರತೆ, ಮಾಹಿತಿ ಮೂಲಗಳು, ಮಹಿಳೆ ಮತ್ತು ಮಾಧ್ಯಮ, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಹಲವು ವೃತ್ತಿಪರ ಆಯ್ಕೆ ಆಧಾರಿತ ಕೋರ್ಸುಗಳಲ್ಲಿ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಮಾದರಿಯ ಕೋರ್ಸುಗಳು ಬೇರೆ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿಲ್ಲ. ಗ್ರಾಮಗಳ ದೇಶವಾದ ಭಾರತದಲ್ಲಿ ಎಂ.ಎ. ಹಂತದಲ್ಲಿ ಮಹಿಳಾ ಅಧ್ಯಯನ ವಿಭಾಗದಲ್ಲಿ ‘ಮಹಿಳೆ ಮತ್ತು ಜಾನುವಾರು ಅಭಿವೃದ್ಧಿ’ ವಿಷಯ ಅಳವಡಿಸಿದ ಭಾರತದ  ಮೊತ್ತ ಮೊದಲ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯ ನಮ್ಮದು.

ವಿಶ್ವವಿದ್ಯಾನಿಲಯವು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ಕೋರ್ಸುಗಳಲ್ಲಿ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಿದೆ. ಹಿಂದುಳಿದ ಪ್ರದೇಶದಲ್ಲಿ ಮದುವೆಯು ಶೈಕ್ಷಣಿಕ ಜೀವನಕ್ಕೆ ಅಡ್ಡಿಪಡಿಸುವ ಹಿನ್ನೆಲೆಯಲ್ಲಿ ದೊರೆಯುವ ಸೀಮಿತ ಕಾಲಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಉದ್ದೇಶ ಇದಕ್ಕಿದೆ. ನಾಲ್ಕನೇ ಸೆಮಿಸ್ಟರ್ ನಲ್ಲಿ ‘ಯೋಜನಾ ಕಾರ್ಯ’ ಕೈಗೆತ್ತಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಬಡ ಸಾಮಾಜಿಕ- ಆರ್ಥಿಕ ಹಿನ್ನೆಲೆಯ ಮಹಿಳೆಯರಿಗೆ ಉನ್ನತ ಶಿಕ್ಷಣ ಒದಗಿಸಿ, ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಲವು ಕೋರ್ಸುಗಳಲ್ಲಿ ವಿಶ್ವವಿದ್ಯಾನಿಲಯವು ರಾಜ್ಯದಲ್ಲಿಯೇ ಅತಿಕಡಿಮೆ ಶುಲ್ಕ ನಿಗದಿ ಪಡಿಸಿದೆ. ವಿಶ್ವವಿದ್ಯಾನಿಲಯವು ಇದೇ ನೀತಿಯನ್ನು ಸಂಲಗ್ನ ಹೊಂದಿದ ಕಾಲೇಜುಗಳಲ್ಲಿಯೂ ಅಳವಡಿಸಿದೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಶಿಕ್ಷಣ ನೀಡುವ ಬದ್ಧತೆ ತೋರಿಸುತ್ತಿರುವ ವಿದ್ಯಾಲಯಗಳಿಗೆ ಅತ್ಯಲ್ಪ ಸಂಲಗ್ನ, ಪ್ರವೇಶ, ಪರೀಕ್ಷಾ ಶುಲ್ಕ ನಿಗದಿ ಪಡಿಸಿದೆ.

ವಿಶ್ವವಿದ್ಯಾನಿಲಯವು ಮಹಿಳೆಯರು ಉನ್ನತ ಶಿಕ್ಷಣ ಮುಂದುವರೆಸುವುದು ಅನುವಾಗುವಂತೆ ಅನನ್ಯ, ಪ್ರಗತಿಪರ ಮತ್ತು ಸುಲಭವಾಗಿ ಹೊಂದಿಕೆಯಾಗುವ ನೀತಿಯನ್ನು ರೂಪಿಸಿದೆ. ವಿದ್ಯಾರ್ಥಿಗಳು ಮದುವೆ, ಹೆರಿಗೆ, ಮಗುವಿನ ಆರೈಕೆಯಂತಹ ಕೌಟುಂಬಿಕ ಕಾರಣಗಳಿಗಾಗಿ ಶಿಕ್ಷಣ ನಿಲ್ಲಿಸುವುದು ಅನಿವಾರ್ಯ ಆಗುತ್ತದೆ. ಅಂತಹ ವಿದ್ಯಾರ್ಥಿಗಳು ನಂತರ  ಬದಲಾದ ಸಂದರ್ಭದಲ್ಲಿ ತಮ್ಮ ಕುಟುಂಬದ ಹೊಟ್ಟೆಪಾಡಿಗಾಗಿ ದುಡಿಯಬೇಕಾದ ಅಥವಾ ಶಿಕ್ಷಣ ಮುಂದುವರೆಸಲು ಅನುವಾಗುವಂತಹ ವಾತಾವರಣ ರೂಪುಗೊಂಡ ಸಂದರ್ಭಗಳಲ್ಲಿ ಹಿಂದಿನ ಶಿಕ್ಷಣವನ್ನೇ ಮುಂದುವರೆಸಲು ಅವಕಾಶ ಕಲ್ಪಿಸಲಾಗುತ್ತಿದೆ. ವಿಶ್ವವಿದ್ಯಾಲಯವು ಇದೇ ರೀತಿಯ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು ಅನುವಾಗುವಂತೆ ಪ್ರವೇಶಾವಕಾಶ ನೀಡುವಂತೆ ಬೇರೆ ವಿಶ್ವವಿದ್ಯಾನಿಲಯಗಳಿಗೆ ಮನವರಿಕೆ ಮಾಡಿದೆ.

ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣ ಆರಂಭಿಸಲಾದ ‘ಕೌಶಲ್ಯಾ ಮಹಿಳಾ ತಂತ್ರಜ್ಞಾನ ಪಾರ್ಕ್’ ವಿನೂತನ ಮತ್ತು ಅನನ್ಯ ಪ್ರಯೋಗ. ವಿದ್ಯಾರ್ಥಿಗಳು ಮತ್ತು ಮಹಿಳೆಯರು ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರ ಸರ್ವಾಂಗೀಣ ಪ್ರಗತಿಗಾಗಿ ಕೌಶಲ್ಯವೃದ್ಧಿ ಪಡಿಸುವ ಉದ್ದೇಶದಿಂದ ಈ ಪಾರ್ಕ್ ಆರಂಭಿಸಲಾಗಿದೆ. ‘ವಿಶ್ವವಿದ್ಯಾನಿಲಯಗಳು ದಂತಗೋಪುರಗಳು ಮತ್ತು ಅಲ್ಲಿ ಸಾಮಾನ್ಯ ಜನರಿಗೆ ಪ್ರವೇಶವಿಲ್ಲ’ ಎಂದು ಜನಸಾಮಾನ್ಯರ ಟೀಕೆಯಾಗಿತ್ತು. ಮಹಿಳಾ ವಿಶ್ವವಿದ್ಯಾನಿಲಯವು ಭಿನ್ನ ವಾತಾವರಣ ರೂಪಿಸುವ ಮೂಲಕ, ವಿದ್ಯಾರ್ಥಿಗಳೊಂದಿಗೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡುವ ಮೂಲಕ ಟೀಕೆಯನ್ನು ಹುಸಿಗೊಳಿದೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಗ್ರಾಮೀಣ ಮಹಿಳೆಯರು ಸ್ವ-ಉದ್ಯಮಶೀಲತೆ ಮತ್ತು ಆರ್ಥಿಕ ಸಶಕ್ತೀಕರಣಕ್ಕೆ ಅನುವಾಗುವಂತೆ ಸಹಾಯ ಹಸ್ತ ಚಾಚಿರುವುದು ವಿಶ್ವವಿದ್ಯಾನಿಲಯದ ಹೆಮ್ಮೆಯ ಸಂಗತಿ.

ವಿಶ್ವವಿದ್ಯಾನಿಲಯವು ನ್ಯಾಕ್ ನಿಂದ ‘ಬಿ’ ಗ್ರೇಡ್ ಮಾನ್ಯತೆ ಪಡೆದಿವೆ. ಇತ್ತೀಚೆಗೆ ವಿಶ್ವವಿದ್ಯಾನಿಲಯಕ್ಕೆ ಕೆ-ಸರ್ಫ್ ರೇಟಿಂಗ್ ನಲ್ಲಿ ನಾಲ್ಕು ನಕ್ಷತ್ರಗಳ ಮಾನ್ಯತೆ ದೊರೆತಿದೆ. ಕಳೆದ 14 ವರ್ಷಗಳಲ್ಲಿ ನಡೆದ ಈ ಪ್ರಗತಿಯು ಸ್ಮರಣಾರ್ಹವಾದದ್ದು. ನಾನು ನಿಮಗೆಲ್ಲರಿಗೂ ಸ್ವಾಗತ ಕೋರುತ್ತೇನೆ. ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ಈ ವಿಶ್ವವಿದ್ಯಾನಿಲಯವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ತಮ್ಮನ್ನು ಅಭಿನಂದಿಸುತ್ತೇನೆ. ಪರಸ್ಪರರ ಬೆಳವಣಿಗೆಗೆ ನಮ್ಮೊಂದಿಗೆ ಸೇರಿಕೊಳ್ಳಿ.

ಮುಂದಿನ ಎರಡು ವರ್ಷ ವಿಶ್ವವಿದ್ಯಾನಿಲಯದ ಆವರಣವು ನಿಮಗೆ ಹಿತಕರ ಮತ್ತು ಶೈಕ್ಷಣಿಕವಾಗಿ ಅತ್ಯುತ್ತಮ ವಾತಾವರಣವನ್ನು ಕಲ್ಪಿಸಲಿದೆ. ತಮಗೆಲ್ಲರಿಗೂ ಶುಭಾಷಯಗಳು.

ಶುಭಾಶಯ ಮತ್ತು ಹಾರೈಕೆಗಳು.